ಪ್ಲುಟೋನಿಯಮ್

testwikiದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಟೆಂಪ್ಲೇಟು:ಮೂಲಧಾತು/ಪ್ಲುಟೋನಿಯಮ್ ಪ್ಲುಟೋನಿಯಮ್ ಒಂದು ವಿಕಿರಣಶೀಲ ಮೂಲಧಾತು. ಇದು ಕೃತಕವಾಗಿ ಸೃಷ್ಟಿಸಲ್ಪಟ್ಟ ಲೋಹವಾದರೂ, ಪ್ರಕೃತಿಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಇರುವುದನ್ನು ೧೯೭೧ರಲ್ಲಿ ಕಂಡುಹಿಡಿಯಲಾಯಿತು. ಇದಕ್ಕೆ ಸುಮಾರು ೧೫ ಸಮಸ್ಥಾನಿಗಳು (isotope) ಇವೆ. ಅದರಲ್ಲಿ Pu-೨೩೯ ಎನ್ನುವ ಸಮಸ್ಥಾನಿ ಕ್ಷಿಪ್ರವಾಗಿ ವಿದಳನಹೊಂದುವುದರಿಂದ ಅಣು ಬಾಂಬ್ ಗಳ ತಯಾರಿಕೆಯಲ್ಲಿ ಹಾಗೂ ಅಣು ವಿದ್ಯುತ್ ಸ್ಥಾವರಗಳಲ್ಲಿ ಇಂಧನವಾಗಿ ಉಪಯೋಗಿಸಲ್ಪಡುತ್ತಿದೆ. ಇದನ್ನು ೧೯೪೦ರಲ್ಲಿ ಅಮೆರಿಕ ದ ವಿಜ್ಞಾನಿಗಳು ಸೃಷ್ಟಿಸಿದರು.

ಇದರ ಪ್ರತೀಕ Pu. ಪರಮಾಣು ಸಂಖ್ಯೆ 94. 1930ರ ವೇಳೆಗೆ ತಿಳಿದಿದ್ದಂತೆ ಯುರೇನಿಯಮ್ 92ನೆಯ ಧಾತು. ಇದರ ಮುಂದಿನ ಧಾತುಗಳನ್ನು ಆವಿಷ್ಕರಿಸಿದಾಗ ಅವುಗಳಿಗೆ ಪರಾಯುರೇನಿಯಮ್ (ಟ್ರಾನ್ಸ್ಯುರೇನಿಯಮ್) ಧಾತುಗಳೆಂದು ಹೆಸರಿಟ್ಟರು.  ಪ್ಲೂಟೋನಿಯಮ್ ತನ್ನ ಸ್ವಾಭಾವಿಕ ವಿಕಿರಣಪಟುತ್ವದಿಂದ ಕ್ಷಯಿಸಿ ಇತರ ಧಾತುಗಳನ್ನೂ ಅವುಗಳ ಐಸೊಟೋಪುಗಳನ್ನೂ ಕೊಡುತ್ತದೆ. ಆದರೆ 1934ರಲ್ಲಿ ಇ. ಫರ್ಮಿ ಮತ್ತಿತರರು ಯುರೇನಿಯಮ್ಮನ್ನು ನ್ಯೂಟ್ರಾನುಗಳಿಂದ ವಿಕಿರಣನಗೊಳಿಸಿದಾಗ (ಇರ‍್ರೇಡಿಯೇಟೆಡ್) ಕೆಲವು ಹೊಸ ವಿಷಯಗಳು ತಿಳಿದು ಬಂದುವು. ಯುರೇನಿಯಮ್ಮಿನ ಒಂದು ಪರಮಾಣು ಒಂದು ನ್ಯೂಟ್ರಾನನ್ನು ತನ್ನ ನ್ಯೂಕ್ಲಿಯಸ್ಸಿನಲ್ಲಿ ತಡೆಹಿಡಿದು ಕೇವಲ 23 ಮಿನಿಟುಗಳ ಅರ್ಧಾಯುವಿರುವ ಯುರೇನಿಯಮ್ಮಿನ ಅಧಿಕ ತೂಕದ ಐಸೊಟೋಪನ್ನೂ ನಿಮ್ನಶಕ್ತಿಯ γ ಕಿರಣಗಳನ್ನೂ ಕೊಡುತ್ತದೆ. ಈ ಹೊಸ ಧಾತು ತನ್ನ ತೀಕ್ಷ್ಣ ವಿಕಿರಣಪಟುತ್ವದಿಂದ ಒಂದು ಎಲೆಕ್ಟ್ರಾನನ್ನು ಕಳೆದುಕೊಂಡು ಕೇವಲ 2.3 ದಿವಸಗಳ ಅರ್ಧಾಯುವಿರುವ ಮತ್ತೊಂದು ಹೊಸ ಧಾತುವನ್ನು ಕೊಡುತ್ತದೆ:

23892U+10n23992U + γ ಕಿರಣಗಳು
23992Uβ23993Np (ಹೊಸಧಾತು)

ಯುರೇನಸ್ ಗ್ರಹದಿಂದ ಹೊರಕ್ಕಿರುವ ಗ್ರಹ ನೆಪ್ಚೂನ್. ಈ ಹೊಸಧಾತು ಆವರ್ತಕೋಷ್ಟಕದಲ್ಲಿ ಯುರೇನಿಯಮ್ಮಿನ ಆಚೆಯ ಪಕ್ಕದಲ್ಲಿರುವುದರಿಂದ ಇದನ್ನು ನೆಪ್ಚೂನಿಯಮ್ ಎಂದು ಕರೆದರು. ಇದು ಕೂಡ ತನ್ನ ವಿಕಿರಣಪಟುತ್ವದಿಂದ ಮತ್ತೊಂದು ಹೊಸ ಧಾತುವನ್ನು ಕೊಡುತ್ತದೆ. ಇದೇ ಪ್ಲೂಟೋನಿಯಮ್.[]

23993Npβ ಕಣ 23994Pu (ಹೊಸಧಾತು)

ಈ ಹೊಸಧಾತು ಅವರ್ತಕೋಷ್ಟಕದಲ್ಲಿ ನೆಪ್ಚೂನಿಯಮ್ಮಿನಿಂದ ಆಚೆಗೆ ಇರುವುದರಿಂದ ಸಹಜವಾಗಿ ಇದಕ್ಕೆ ಪ್ಲೂಟೋನಿಯುಮ್ ಎಂಬ ಹೆಸರು ಬಂತು.[] ಇದರ ಅರ್ಧಾಯು 24,000 ವರ್ಷಗಳು. ಇಷ್ಟೂ ಅಲ್ಲದೆ ಯುರೇನಿಯಮ್ಮನ್ನು ನ್ಯೂಟ್ರಾನುಗಳಿಂದ ಅಥವಾ µ-ಕಣಗಳಿಂದ ಬಂಬಾಯಿಸಿ ಕೆಲವು ಹೊಸ ಧಾತುಗಳನ್ನು ಪಡೆಯಲಾಯಿತು. ಹೀಗೆ ಕೃತಕವಾಗಿ ಪಡೆದ ಧಾತುಗಳಿಂದ ರಸವಿಜ್ಞಾನಿಗಳ ಕನಸು ಸ್ವಲ್ಪ ಮಟ್ಟಿಗೆ ನನಸಾಯಿತು. ಜಾನ್ ಡಾಲ್ಟನ್ನನ ಪರಮಾಣುವಾದಕ್ಕೂ ಕೊಂಚ ಲೋಪ ತಟ್ಟಿತು. ಯುರೇನಿಯಮ್ಮನ್ನು µ ಕಣಗಳಿಂದ ಬಂಬಾಯಿಸಿದಾಗ ಪ್ಲೂಟೋನಿಯಮ್ಮಿನ ಮತ್ತೊಂದು ಐಸೊಟೋಪ್ ಲಭಿಸಿತು:[]

23892U+21H (µ ಕಣ) 23893Np+2n (ನ್ಯೂಟ್ರಾನುಗಳು)
23893Npβ (ಎಲೆಕ್ಟ್ರಾನುಗಳು) 23894Pu

239Pu ವಿನ ತಯಾರಿಕೆ

ಪ್ರಕೃತಿಯಲ್ಲಿ ದೊರೆಯುವ ಯುರೇನಿಯಮ್ಮಿನಲ್ಲಿ ಎರಡು ಐಸೊಟೋಪುಗಳಿರುವುವು. ಇವನ್ನು ನ್ಯೂಟ್ರಾನುಗಳಿಂದ ವಿಕಿರಣನಗೊಳಿಸಿದಾಗ ಲಘುಯುರೇನಿಯಮ್ ಕ್ರಿಯೆ ಹೊಂದಿ ನ್ಯೂಟ್ರಾನುಗಳನ್ನು ಕೊಡುತ್ತದೆ. ಇದನ್ನು ಅಧಿಕ ಭಾರದ ಯುರೇನಿಯಮ್ ತೆಗೆದುಕೊಂಡು ಈ ಕೆಳಗೆ ನಮೂದಿಸಿರುವ ಕ್ರಿಯೆಯಾಗುತ್ತದೆ:

23892U+n23992Uβ23993Npβ23994Pu

ಪರಮಾಣು ಶಕ್ತಿಗೆ 23994Pu ಬೇಕಾದ್ದರಿಂದ ಮೇಲಿನ ಕ್ರಿಯೆಯೇ ಉಪಯುಕ್ತವಾದುದು. ಆದರೆ ಈ ಕ್ರಿಯೆಯಲ್ಲಿ ಅತಿ ಶೀಘ್ರದಲ್ಲಿಯೇ ವೇಗದ ನ್ಯೂಟ್ರಾನುಗಳ ಸಂಖ್ಯೆ ಮಿತಿಮೀರಿ ಪರಮಾಣು ವಿದಳನೆಯನ್ನು ತಡೆಯಲು ಅಸಾಧ್ಯವಾಗುತ್ತದೆ. ಈ ಕ್ರಿಯಾವೇಗವನ್ನು ಕಡಿಮೆ ಮಾಡಿದಲ್ಲಿ 239Pu ತಯಾರಿಕೆ ಸುಲಭ. ಈ ವಿಷಯದಲ್ಲಿ ಇ.ಫರ್ಮಿ, ಇ.ಪಿ. ವಿಗ್‌ನರ್ ಮೊದಲಾದವರು ಪ್ರಭಾವಯುತ ಕೆಲಸಮಾಡಿ ಪರಮಾಣು ಅಟ್ಟಣೆಯನ್ನು (ಪೈಲ್) ಸೃಜಿಸಿದರು. ಜೇನುಗೂಡನ್ನು ಹೋಲುವಂಥ ಗ್ರ್ಯಾಫೈಟ್ ಅಟ್ಟಣೆಗಳನ್ನು ಜೋಡಿಸಿ ಅವುಗಳ ಮಧ್ಯದಲ್ಲಿ ಯುರೇನಿಯಮ್ ತುಂಡುಗಳನ್ನು ಇರಿಸಿದರು. ಗ್ರ್ಯಾಫೈಟ್ ಅತಿವೇಗದ ನ್ಯೂಟ್ರಾನುಗಳನ್ನು ಹೀರಿ ಅವುಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ. ಇದರಿಂದ 239Puವನ್ನು ಪಡೆಯುವುದು ಕೈಗೊಂಡಿತು. ಇಂಥ ಪ್ರಥಮ ಅಟ್ಟಣೆಯನ್ನು 1942 ಡಿಸೆಂಬರ್ 2ರಂದು ರಚಿಸಿ ಅದರ ಸಾಧ್ಯತೆಯನ್ನು ತೋರಿಸಲಾಯಿತು. ಅನಂತರ ಈ ಲೋಹದ ತಯಾರಿಕೆಯನ್ನು ಬೃಹತ್ ಮೊತ್ತದಲ್ಲಿ ಯೋಜಿಸಲಾಯಿತು. ಪ್ರಯೋಗ ಶಾಲೆಗಳಲ್ಲಿ ಮಹತ್ತ್ವದ ಸಂಶೋಧನೆಗಳಾದುವು. ಅವುಗಳ ಮುಖ್ಯ ಉದ್ದೇಶ ಎರಡು: ಹೇಗೆ ಇದನ್ನು ಹೆಚ್ಚುವರಿಯಲ್ಲಿ ಪಡೆಯಬಹುದು ಮತ್ತು ಹೇಗೆ ಇದನ್ನು ಇತರ ಫಲಿತ ವಸ್ತುಗಳಿಂದ ಬೇರ್ಪಡಿಸಬಹುದು. ಈ ಪ್ರಯೋಗಗಳು ಬಹಳ ಅಪಾಯಕಾರಿ. ಹೊರಹೊಮ್ಮುವ ವಿಕಿರಣ ಅತಿ ತೀಕ್ಷ್ಣ. ಅತಿಭಯಾನಕ ಸ್ಛೋಟನೆಯ ಸಂಭಾವ್ಯತೆಯೂ ಉಂಟು. ಈ ತೊಂದರೆಗಳಾಗದಂತೆ ಪ್ರಯೋಗ ನಡೆಸಲು ಭೌತ ಮತ್ತು ರಸಾಯನವಿಜ್ಞಾನಿಗಳು, ವೈದ್ಯರು, ಎಂಜಿನಿಯರುಗಳು ಆದಿಯಾಗಿ ಅನೇಕ ಸಂಶೋಧಕರು ಭಾಗವಹಿಸಿದರು. ಅತಿ ಮಹತ್ತ್ವದ ವಿಚಾರ ವಿನಿಮಯಗಳಾದ ಬಳಿಕ  239Pu ವನ್ನು  ಪ್ರತ್ಯೇಕಿಸುವ ವಿಧಾನ ಎಫ್.ಎಚ್ ಸ್ಪೆಡಿಂಗ್ ಎಂಬವರ ನೇತೃತ್ವದಲ್ಲಿ ಪ್ರಾರಂಭವಾಯಿತು. ಆ ಕಾಲಕ್ಕೆ ನುರಿತ ವಿಕಿರಣವಿಜ್ಞಾನಿಗಳ ಅಭಾವವಿದ್ದುದರಿಂದ ಮೊದಲು ಅವರ ತರಬೇತಿಯನ್ನು ಗ್ಲೆನ್ ಟಿ.ಸೀಬೊರ್ಗ್ ಎಂಬವರು ಪ್ರಾರಂಭಿಸಿದರು. (1942ರ ಬೇಸಿಗೆ). ಮೊದಲ ಹಂತದಲ್ಲಿ 239Puವಿನ ಬೇರ್ಪಡಿಕೆಯ ಕೆಲವು ಸಾಧ್ಯ ವಿಧಾನಗಳನ್ನು ಚರ್ಚಿಸಲಾಯಿತು. ಇವುಗಳ ಆಧಾರದಮೇಲೆ ಯುಕ್ತ ಯಂತ್ರಗಳ ಜೋಡಣೆಯಾಗಬೇಕಿತ್ತು. ಅವಕ್ಷೇಪಣ (ಪ್ರೆಸಿಪಿಟೇಶನ್), ದ್ರಾವಣದಿಂದ ಆಸವನ (ಸಾಲ್ವೆಂಟ್ ಎಕ್ಸ್‌ಟ್ರ್ಯಾಕ್ಷನ್), ಬಾಷ್ಪಶೀಲತೆ (ವೊಲಟೈಲಿಟಿ), ಮೇಲ್ಮೈ ಹೀರುವಿಕೆಯಿಂದ ಬೇರ್ಪಡಿಕೆ, ಉಚ್ಚಶಾಖಲೋಹವಿಜ್ಞಾನ ಮತ್ತು ಉಚ್ಚಶಾಖರಾಸಾಯನಿಕ ತತ್ತ್ವಗಳ ಮೇಲೆ ಬೇರ್ಪಡಿಕೆಯ ಸಾಧ್ಯಾಸಾಧ್ಯತೆಗಳನ್ನು ವಿಮರ್ಶಿಸಲಾಯಿತು. ಅಂತ್ಯದಲ್ಲಿ ಅವಕ್ಷೇಪಣ ವಿಧಾನವೇ ಆಗಿನ ಸಂದರ್ಭಕ್ಕೆ ಯುಕ್ತವಾದದ್ದೆಂದು ತೀರ್ಮಾನಿಸಲಾಯಿತು. ಈ ವಿಧಾನದಿಂದ ಯುದ್ಧದ ಅವಸರಕ್ಕೆ ಬೇಕಾದ, ಸ್ವಲ್ಪ ಮೊತ್ತದಲ್ಲಿಯಾದರೂ 239Pu ವನ್ನು ಪಡೆಯುವ ನಂಬಿಕೆಯಿತ್ತು. ಬೇರೆ ವಿಧಾನಗಳಿಂದ ಈ ಲೋಹವನ್ನು ಹೆಚ್ಚುವರಿಯಲ್ಲಿ ಪಡೆಯಲು ತತ್ತ್ವಶಃ ಸಾಧ್ಯವಿದ್ದರೂ ಪ್ರಾಯೋಗಿಕವಾಗಿ ಪಡೆಯುವ ಭರವಸೆ ಆಗ ಇರಲಿಲ್ಲ. ಆದರೆ ಈ ವಿಧಾನದಲ್ಲಿ ಕ್ರಿಯೆ ಹೊಂದದ ಯುರೇನಿಯಮ್ಮನ್ನು ಮರಳಿ ಪಡೆಯುವ ಸಾಧ್ಯತೆ ಸೊನ್ನೆ. ಹತ್ತು ಲಕ್ಷ ತೂಕ ಯುರೇನಿಯಮ್ಮಿನಲ್ಲಿ ಕೇವಲ 250 ತೂಕ ಮಾತ್ರ ಪ್ಲೂಟೋನಿಯಮ್ ಇರುತ್ತದೆ. ಇಷ್ಟು ಕಡಿಮೆ ಮೊತ್ತದ ಪ್ಲೂಟೋನಿಯಮ್ಮನ್ನು ಅದರ ಸಂಯಕ್ತಕ್ಕೆ  ಪರಿವರ್ತಿಸಿ ಅವಕ್ಷೇಪಿಸಲು ಸಾಧ್ಯವಿಲ್ಲ. ಆದ್ದರಿಂದ ಇದನ್ನು ಬೇರೆ ಸಂಯುಕ್ತಗಳೊಡನೆ ಸಹಾವಕ್ಷೇಪಿಸಲು (ಕೋಪ್ರೆಸಿಪಿಟೇಶನ್) ಯೋಜಿಸಲಾಯಿತು. ಯುರೇನಿಯಮ್ಮಿನಿಂದ ಬರುವ ವಿಸಂಘಟಿತ ಉತ್ಪನ್ನಗಳನ್ನು ಬೇರ್ಪಡಿಸಲು ಈ ಪ್ರಯೋಗದಿಂದ ಸಾಧ್ಯವಾಯಿತು. ಇದಕ್ಕೆ ಶುಚಿಗೊಳಿಸುವಿಕೆ ಎಂದು ಹೆಸರು. ಎಂದರೆ ಈ ಪ್ರಯೋಗ ಪ್ಲೂಟೋನಿಯಮ್ ಮಾತ್ರವೇ ಅಲ್ಲ. ಅನೇಕ ಹೊಸ ಕೃತಕಧಾತುಗಳ ಬೇರ್ಪಡಿಕೆ ಕೂಡ ಅಗಿದೆ. ಇದರಲ್ಲಿ ಅತಿ ಕಷ್ಟದ ಭಾಗ ಕೆಲಸಗಾರರು ಈ ಧಾತುಗಳಿಂದ ಹೊರಹೊಮ್ಮುವ ಅಪಾಯಕಾರಿ ವಿಕಿರಣದಿಂದ ದೂರವಿರಬೇಕಾದದ್ದು.  ದೊರೆತ 239Pu ಒಂದು ಸಂಧಿಸ್ಥ ತೂಕಕ್ಕಿಂತ (ಕ್ರಿಟಿಕಲ್ ಮಾಸ್) ಹೆಚ್ಚಾಗಿರಬಾರದು. ಹಾಗಿದ್ದರೆ ಅದು ಸ್ವಪ್ರೇರಣೆಯಿಂದ ಸ್ಛೋಟಿಸುತ್ತದೆ. ಇದೇ ಪರಮಾಣು ಬಾಂಬಿನಲ್ಲಿ ಅಡಗಿರುವ ಮೂಲತತ್ತ್ವ. ಈ ನಿಯಮಗಳನ್ನು ಅನುಸರಿಸಿ ಶುಭ್ರ 239Pu ವನ್ನು ಪಡೆಯಬೇಕು. ಈ ಕಾರ್ಯದಲ್ಲಿದ್ದ ಮೂಲ ಅಡಚಣೆ ಎಂದರೆ 239Pu ಬಗ್ಗೆ ಆಗ ಇದ್ದ ಅಸಂಪೂರ್ಣಜ್ಞಾನ. ಸೈಕ್ಲೊಟ್ರಾನಿನಲ್ಲಿ ಯುರೇನಿಯಮ್ ಪರಮಾಣುಗಳನ್ನು ನ್ಯೂಟ್ರಾನುಗಳಿಂದ ಬಂಬಾಯಿಸಿದಾಗ ಅತಿ ಕಡಿಮೆ ಪ್ಲೂಟೋನಿಯುಮ್ ಧಾತು ದೊರೆಯುತ್ತದೆಂಬುದನ್ನು ಅನುರೇಖದ ತಂತ್ರದಿಂದ (ಟ್ರೇಸರ್ ಟಿಕ್ನೀಕ್) ಮಾತ್ರ ತಿಳಿಯಲಾಗಿತ್ತು. ಇದನ್ನು ಪ್ರತ್ಯೇಕವಾಗಿ ಪಡೆದು ಅದರ ರಾಸಾಯನಿಕ ಗುಣಗಳನ್ನು ತಿಳಿದಿರಲಿಲ್ಲ. ಅನುರೇಖನ ರಸಾಯನವಿಜ್ಞಾನ ಆಗ ಇನ್ನೂ ಹೊಸತು. ಈ ವಿಷಯ ಎಲ್ಲವನ್ನೂ ಗಮನದಲ್ಲಿಟ್ಟು ಊಹಿಸಿದ್ದಕ್ಕಿಂತಲೂ ಸಮರ್ಪಕವಾಗಿ 239Puವನ್ನು ತಯಾರಿಸಲಾಯಿತು. ಇದರ ವಿವರ ಹೀಗೆ. ವಿಕಿರಣನಗೊಳಿಸಿದ ಯುರೇನಿಯಮ್ಮನ್ನು ನೈಟ್ರಿಕ್ ಅಮ್ಲದಲ್ಲಿ ವಿಲೀನಗೊಳಿಸಿ ಯುರೇನಿಯಮ್ ಒತ್ತರಿಸಿದಂತೆ ಸಲ್ಫ್ಯೂರಿಕ್ ಆಮ್ಲವನ್ನು ಬೆರೆಸಿ, ಬಿಸ್ಮತ್ ಫಾಸ್ಛೇಟನ್ನು ಸೇರಿಸಿದಾಗ 239Pu(iv) ಸಹಾವಕ್ಷೇಪಿಸಿತು. ಉತ್ಕರ್ಷಿಸಿದ 239Pu(iv) ಅವಕ್ಷೇಪಿಸದೇ ಇರುವುದು ಈ ವಿಧಾನದ ಅನಿರೀಕ್ಷಿತ. ಇದನ್ನು ಅಪಕರ್ಷಿಸಿ ಬಿಸ್ಮತ್ ಫಾಸ್ಛೇಟಿನಿಂದ ಸಹಾವಕ್ಷೇಪಿಸಿದಾಗ 239Pu(iv) ಅವಕ್ಷೇಪಿಸಿತು. ಹೀಗೆ ಪ್ಲೂಟೋನಿಯಮ್ಮನ್ನು ಉತ್ಕರ್ಷಿಸಿ ಅಪಕರ್ಷಿಸಿ ಸಹಾವಕ್ಷೇಪಿಸಿದಾಗ ಅದರ ಸಾರತೆ ಹೆಚ್ಚುತ್ತ ಹೋಯಿತು. ಮುಂದಿನ ಪ್ರಯೋಗಗಳಲ್ಲಿ ಬಿಸ್ಮತ್ ಫಾಸ್ಛೇಟ್ ಮತ್ತು ಲ್ಯಾಂಥನಮ್ ಪ್ಲೂರೈಡ್ ಮಿಶ್ರಣವನ್ನು ಉಪಯೋಗಿಸಿ ಉತ್ತಮ ಫಲಿತಾಂಶಗಳನ್ನು ಪಡೆಯಲಾಯಿತು. ಕೊನೆಯ ಹಂತಗಳಲ್ಲಿ ಪ್ಲೂಟೋನಿಯಮ್ ಫಾಸ್ಛೇಟಿನ ಸಾಕಷ್ಟು ಸಾರಯುತ ದ್ರಾವಣ ದೊರೆತದ್ದರಿಂದ ಸಹಾವಕ್ಷೇಪವಿಲ್ಲದೆ ನೇರವಾಗಿ ನೈಟ್ರಿಕ್ ಆಮ್ಲದ ದ್ರಾವಣದಿಂದ ಪ್ಲೂಟೋನಿಯಮ್ ಪರಾಕ್ಸೈಡನ್ನು ಅವಕ್ಷೇಪಿಸಲು ಸಾಧ್ಯವಾಯಿತು. ಈ ಕೊನೆಯ ಹಂತವನ್ನು ಅನೇಕ ಬಾರಿ ಪುನರಾವರ್ತಿಸಿ ಸಾಕಷ್ಟು ಶುಭ್ರ ಪ್ಲೂಟೋನಿಯಮ್ ಪರಾಕ್ಸೈಡನ್ನು ಪಡೆಯಲಾಯಿತು.

ಪ್ಲೂಟೋನಿಯಮ್ ಲೋಹ

ಮೊದಲ ಬಾರಿಗೆ ಪ್ಲೂಟೋನಿಯಮ್ ಆಕ್ಸೈಡನ್ನು ಪ್ಲೂಟೋನಿಯಮ್ ಫ್ಲೂರೈಡಾಗಿ ಪರಿವರ್ತಿಸಿ ಅದರಿಂದ ಈ ಲೋಹವನ್ನು ಪಡೆದರು. ಫ್ಲೂರೈಡನ್ನು ಬೇರಿಯಮ್ ಲೋಹದೊಡನೆ ತೋರಿಯಮ್ ಮೂಸೆಗಳಲ್ಲಿ 1400Cಗೆ ಶೂನ್ಯ ವಾತಾವರಣದಲ್ಲಿ ಕಾಸಿದಾಗ ಬೆಳ್ಳಿಯ ಹೊಳಪುಳ್ಳ ಪ್ಲೂಟೋನಿಯಮ್ ಲೋಹ ಬೇರ್ಪಟ್ಟಿತು. ಇದನ್ನು ಲೋಹರೂಪದಲ್ಲಿ ಪಡೆದ ಬಳಿಕ ಇದರ ಅನೇಕ ಭೌತ ಮತ್ತು ರಾಸಾಯನಿಕ ಗುಣಗಳನ್ನು ಪರೀಕ್ಷಿಸಲಾಯಿತು. ಇದು ಅನೇಕ ಐಸೊಟೋಪುಗಳಾಗಿರಬಲ್ಲದು. ಇದಕ್ಕೆ ದ್ರಾವಣ ರೂಪದಲ್ಲಿ ನಾಲ್ಕು ಉತ್ಕರ್ಷಣ ಸ್ಥಿತಿಗಳಿವೆ. ಇದಕ್ಕೆ ಆರು ಬಹರೂಪತೆಗಳು (ಅಲ್ಲೊಟ್ರೋಪ್ಸ್) ಉಂಟು. ಬೇರೆ ಲೋಹಗಳಂತೆ ಪ್ಲೂಟೋನಿಯಮ್ಮನ್ನು ಇದರ ಲವಣಗಳ ರೂಪದಲ್ಲಿ ಪಡೆಯಬಹುದು.

ಉಪಯೋಗ

ನ್ಯೂಕ್ಲಿಯರ್ ಇಂಧನವಾಗಿ ಇದರ ಮುಖ್ಯ ಉಪಯೋಗವಿದೆ. ಎಂದೇ ಪರಮಾಣು ಆಯುಧಗಳಲ್ಲಿ ಇದು ಅಗತ್ಯ ಆಂಶವಾಗಿದೆ. ಇದನ್ನು ಪೆಟ್ರೋಲಿಯಮ್ಮಿನಂತೆ ಸುಲಭ ಇಂಧನವಾಗಿ ಬಳಸಲು ಸಾಧ್ಯವಾದಾಗ ಮಾನವನ ಶಕ್ತಿದಾಹ ಒಮ್ಮೆಗೆ ಹಿಂಗಬಹುದು.

ಉಲ್ಲೇಖಗಳು

ಟೆಂಪ್ಲೇಟು:Reflist

ಬಾಹ್ಯ ಸಂಪರ್ಕಗಳು