ಕಾರ್ಲ್ ಪಿಯರ್ಸನ್

testwikiದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
1912ರಲ್ಲಿ ಪಿಯರ್ಸನ್

ಕಾರ್ಲ್ ಪಿಯರ್ಸನ್ (1857-1936)[] ಇಂಗ್ಲೆಂಡಿನ ಒಬ್ಬ ಅನ್ವಿತ ಗಣಿತಶಾಸ್ತ್ರವಿದ, ಜೀವಮಾಪನ ತಜ್ಞ ಹಾಗೂ ಸಂಖ್ಯಾಕಲನಶಾಸ್ತ್ರವಿದ.[][] ಇಪ್ಪತ್ತನೆಯ ಶತಮಾನದ, ಅಂದರೆ ಆಧುನಿಕ ಸಂಖ್ಯಾಕಲನವಿಜ್ಞಾನದ (ಸ್ಟ್ಯಾಟಿಸ್ಟಿಕ್ಸ್) ಮೂಲಪುರುಷನಿವ.

ಜನನ, ವಿದ್ಯಾಭ್ಯಾಸ

1857 ಮಾರ್ಚ್ 27 ರಂದು ಲಂಡನ್ನಿನಲ್ಲಿ ಜನನ. ಕೇಂಬ್ರಿಜಿನ ಕಿಂಗ್ಸ್ ಕಾಲೇಜಿನಲ್ಲಿ ಗಣಿತವನ್ನು ಅಭ್ಯಸಿಸಿ[] 1879 ರಲ್ಲಿ ರ‍್ಯಾಂಗ್ಲರ್ ಪದವಿ ಪಡೆದ. ಇವನದು ಬಹುಮುಖ ಪ್ರತಿಭೆ. ಜರ್ಮನಿಯಲ್ಲಿ ತತ್ವಶಾಸ್ತ್ರ ಮತ್ತು ರೋಮನರ ಕಾಯಿದೆ ಕಲಿತ. ಕಾರ್ಲ್ ಮಾರ್ಕ್ಸ್‌ನ (1818-1883) ಬರಹಗಳಿಂದ ಪ್ರಭಾವಿತನಾಗಿ ಮುಕ್ತ ಸಮಾಜ, ಮುಕ್ತ ವಿಚಾರಗಳನ್ನು ಪ್ರತಿಪಾದಿಸಿ ಪುಸ್ತಕ ಬರೆದ.

ವೃತ್ತಿಜೀವನ, ಸಾಧನೆಗಳು

1884 ರಲ್ಲಿ (ವಯಸ್ಸು 27) ಅನ್ವಿತ ಗಣಿತ ಮತ್ತು ಬಲವಿಜ್ಞಾನ (ಅಪ್ಲೈಡ್ ಮ್ಯಾತ್‌ಮ್ಯಾಟಿಕ್ಸ್ ಆಂಡ್ ಮೆಕ್ಯಾನಿಕ್ಸ್) ವಿಷಯದ ಪ್ರಾಚಾರ್ಯನಾಗಿ ಯುನಿವರ್ಸಿಟಿ ಕಾಲೇಜಿನಲ್ಲಿ (ಲಂಡನ್) ನೇಮಕಗೊಂಡ. ಆದರೂ ತತ್ವಶಾಸ್ತ್ರ, ವಿಜ್ಞಾನ, ಲಲಿತ ಕಲೆ ಮುಂತಾದ ವಿವಿಧ ವಿಷಯಗಳ ಬಗ್ಗೆ ಲೇಖನ ಬರೆದ. ಲೆನಿನ್ ಕೂಡ ತನ್ನ ಬರಹಗಳಲ್ಲಿ ಪಿಯರ್ಸನ್‍ನನ್ನು ಉಲ್ಲೇಖಿಸಿದ್ದಾನೆ.

1890 ರಲ್ಲಿ ಗಾಲ್ಟನ್, ವೆಲ್ಡನ್ ಇವರುಗಳಿಂದ ಪ್ರಭಾವಿತನಾದ ಪಿಯರ್ಸನ್‍ನ ಒಲವು ಜೀವಶಾಸ್ತ್ರದತ್ತ ತಿರುಗಿತು. ವಸ್ತುಗಳ ಮತ್ತು ಪ್ರಾಣಿಗಳ ವಿವಿಧ ಅಂಗ ಮತ್ತು ಗುಣಗಳ ಅಳತೆಗಳಿಗೆ ಹೊಂದುವಂತೆ ಸಂಖ್ಯಾಕಲನಾತ್ಮಕ ವಿತರಣೆಗಳನ್ನು ಶೋಧಿಸಲು ತೊಡಗಿದ. ಯಾವ ನ್ಯಾಸಕ್ಕೆ ಯಾವ ಗಣಿತ ರೇಖೆಯನ್ನು ಪೊರ್ದಿಸಬೇಕೆಂಬುದರ ಬಗ್ಗೆ ಲೇಖನಗಳನ್ನು ಬರೆದ. ಈ ರೇಖೆಗಳ ಪರಿವಾರಕ್ಕೆ ಪಿಯರ್ಸನ್ನನ ವ್ಯವಸ್ಥೆ (ಸಿಸ್ಟಮ್) ಎಂಬ ಹೆಸರಿದೆ. ದತ್ತನ್ಯಾಸವನ್ನು ಪ್ರತಿನಿಧಿಸಲು ಯಾವ ಗಣಿತ ರೇಖೆಯನ್ನು ಉಪಯೋಗಿಸಬೇಕೆಂದು ನಿರ್ಧರಿಸಲು χ2 (ಕೈವರ್ಗ) ಎಂಬ ಹೊಂದಾಣಿಕೆ ಮಾಪನವನ್ನು (ಗುಡ್‌ನೆಸ್ ಆಫ್ ಫಿಟ್) ಉಪಜ್ಞಿಸಿದ.[] ಈ ಮಾಪನವನ್ನು ಈಗ ಜೀವಶಾಸ್ತ್ರ, ಸಮಾಜಶಾಸ್ತ್ರ, ಭೌತಶಾಸ್ತ್ರಗಳಲ್ಲಿಯೂ ಹೊಂದಾಣಿಕೆ ಮಾಪನವಾಗಿ ಉಪಯೋಗಿಸಲಾಗುವುದು. ದತ್ತನ್ಯಾಸ ಒಂದು ನಿರ್ದಿಷ್ಟ ವಿತರಣೆಯಿಂದ ಆಯಲ್ಪಟ್ಟದ್ದೇ, ಎರಡು ಅಥವಾ ಹೆಚ್ಚು ವಿಶೇಷಣಗಳು (ಅಟ್ರಿಬ್ಯೂಟ್ಸ್) ಪರಸ್ಪರ ಸ್ವತಂತ್ರಗಳಾಗಿರುವುವೇ ಮುಂತಾದವನ್ನು ನಿರ್ಧರಿಸುವುದಕ್ಕೂ χ2 ನ್ನು ಉಪಯೋಗಿಸುವರು.

1893 ರಿಂದ 1900 ತನಕ ಪಿಯರ್ಸನ್ ಮಾನವ ವಿಕಾಸದ ಬಗ್ಗೆ ಲೇಖನ ಸರಣಿಯನ್ನು ಬರೆದ. ತಳಿವಿಜ್ಞಾನವನ್ನೂ ಅನುವಂಶಿಕತೆಯನ್ನೂ ಗಣಿತಶಾಸ್ತ್ರದ ಭದ್ರ ತಳಹದಿಯ ಮೇಲೆ ನಿಲ್ಲಿಸಿದ. ಜೀವಮಾಪನದ (ಬಯೊಮೆಟ್ರಿ) ಲೇಖನಗಳಿಗೆ ಮೀಸಲಾದ ಬಯೋಮೆಟ್ರಿಕ ಎಂಬ ನಿಯತಕಾಲಿಕವನ್ನು ಪ್ರಕಾಶಿಸಲು ಆರಂಭಿಸಿದ (1902).[] ತಲೆಬುರುಡೆ, ಇತರ ಎಲುಬುಗಳು ಮತ್ತು ಅಂಗಗಳನ್ನು ಅಳೆದು ಅಭ್ಯಸಿಸುವ, ಮೆಂಡೆಲನ ಗುಣಗಳನ್ನು ಶೋಧಿಸುವ, ಬುದ್ಧಿವಂತಿಕೆ ಸೂಚ್ಯಂಕವನ್ನು (ಇಂಟಲಿಜನ್ಸ್ ಕೋಶಂಟ್) ಅಳೆಯುವ ಬಗ್ಗೆ ಲೇಖನಗಳನ್ನು ಇದರಲ್ಲಿ ಪ್ರಕಟಿಸಲಾಗುತ್ತಿತ್ತು. ದತ್ತನ್ಯಾಸಕ್ಕೆ ವಿವಿಧ ರೇಖೆಗಳನ್ನು ಪೊರ್ದಿಸಲು ಅನುಕೂಲವಾಗುವ ಗಣಿತಸಾರಣಿಗಳನ್ನು (ಟೇಬಲ್ಸ್) ಇದರಲ್ಲಿ ಪ್ರಕಟಿಸುತ್ತಿದ್ದ. ಎರಡು ಅಥವಾ ಹೆಚ್ಚು ಗುಣಗಳ ಸಹಸಂಬಂಧವನ್ನು ಅಳೆಯುವ ಸಹಸಂಬಂಧ ಸೂಚ್ಯಂಕಗಳನ್ನು ಬಳಕೆಗೆ ತಂದ. ಪಿಯರ್ಸನ್ ಪ್ರತಿಪಾದಿಸಿದ ತತ್ತ್ವಗಳಲ್ಲಿ ಕೆಲವೊಂದು ಲೋಪದೋಷಗಳು ಇತ್ತೀಚೆಗೆ ಕಂಡುಬಂದರೂ ಅವನು ಅನುಸರಿಸಿದ ಸಂಖ್ಯಾಕಲನಾತ್ಮಕ ವಿಧಾನಗಳು, ಜೀವಸಂಖ್ಯಾಕಲನಾತ್ಮಕ ಅಧ್ಯಯನದಲ್ಲಿ ಮಾತ್ರವಲ್ಲದೆ, ಔಷಧಶಾಸ್ತ್ರ (ಫಾರ್ಮಕಾಲಜಿ), ತಂತ್ರವಿದ್ಯೆ (ಟೆಕ್ನಾಲಜಿ) ಮತ್ತಿತರ ಶಾಸ್ತ್ರಾಧ್ಯಯನಗಳಲ್ಲಿಯೂ ಯಶಸ್ವಿಯಾಗಿ ಉಪಯೋಗಿಸಲ್ಪಡುತ್ತಿವೆ. 1911 ರಲ್ಲಿ ಪಿಯರ್ಸನ್ ಯೂನಿವರ್ಸಿಟಿ ಕಾಲೇಜಿನ ಸುಜನನ ವಿಜ್ಞಾನದ (ಯೂಜೆನಿಕ್ಸ್) ಪ್ರಾಚಾರ್ಯನಾಗಿ ನೇಮಕಗೊಂಡು[] 1933 ರ ತನಕ ಮಾನವ ಜೀವಶಾಸ್ತ್ರದ ಅಧ್ಯಯನಕ್ಕೆ ಅಮೋಘ ಕೊಡುಗೆ ಸಲ್ಲಿಸಿದ.

ನಿಧನ

1936 ರ ಏಪ್ರಿಲ್ 27 ರಂದು ಕಾರ್ಯನಿರತನಾಗಿದ್ದಾಗಲೇ ಮರಣ ಹೊಂದಿದ.

ಉಲ್ಲೇಖಗಳು

ಟೆಂಪ್ಲೇಟು:ಉಲ್ಲೇಖಗಳು

  1. ಟೆಂಪ್ಲೇಟು:Cite web
  2. ಟೆಂಪ್ಲೇಟು:Cite web
  3. ಟೆಂಪ್ಲೇಟು:Cite web
  4. ಟೆಂಪ್ಲೇಟು:Acad
  5. ಟೆಂಪ್ಲೇಟು:Cite journal
  6. ಟೆಂಪ್ಲೇಟು:Cite journal
  7. Blaney, Tom (2011). The Chief Sea Lion's Inheritance: Eugenics and the Darwins. Troubador Pub., p. 108. Also see Pearson, Roger (1991). Race, Intelligence and Bias in Academe. Scott-Townsend Publishers.

ಹೊರಗಿನ ಕೊಂಡಿಗಳು

ಟೆಂಪ್ಲೇಟು:Includes Wikisource